ಜನತಾದಳ(ಸೆಕ್ಯೂಲರ್) ಕಾನೂನಾತ್ಮಕವಾಗಿ ರಚನೆಗೊಂಡ(1999) ನಂತರದ 20 ವರ್ಷಗಳ ಅವಧಿಯಲ್ಲಿ, ಆ ಪಕ್ಷದ ಮುಖ್ಯಮಂತ್ರಿ ಇದ್ದದ್ದು ಕೇವಲ 20 ತಿಂಗಳಿಗೆ ಮಾತ್ರ ಅದು ಬೇರೆಯವರ ಬೆಂಬಲದಿಂದ. ಈ 20 ವರ್ಷದ ಅವಧಿಯಲ್ಲಿ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿದ್ದ ಜನತಾದಳ ಕೇವಲ 3 ಜಿಲ್ಲೆಗಳಿಗೆ ಸೀಮಿತವಾಗಿತ್ತು ಮತ್ತು ಪರಿವಾರ ಪಕ್ಷ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಒಂದು ಕಾಲದಲ್ಲಿ 16ಕ್ಷೇತ್ರಗಳಲ್ಲಿ ಗೆಲ್ಲಿಸುವುದರ ಮೂಲಕ ದೇವೇಗೌಡರನ್ನು ಪ್ರಧಾನಿಯಾಗಿಸಿದ್ದ ಜನತೆ, ಇಂದು ಆ ಪಕ್ಷದಿಂದ ಅನಾಯಾಸವಾಗಿ ಗೆಲ್ಲಿಸುತ್ತಿರುವುದು ಅವರೊಬ್ಬರನ್ನೆ!
ಈ ಅವಧಿಯಲ್ಲಿ ಜನತಾದಳದ ಆಕ್ಸಿಜನ್ ಆಗಿ ಕಾರ್ಯನಿರ್ವಹಿಸಿದ್ದು ಅದೇ ಗೌಡರ ಚದುರಂಗದಾಟ, ಒಕ್ಕಲಿಗ ಮತಗಳು, 20 ತಿಂಗಳ ಕುಮಾರಸ್ವಾಮಿಯ ಆಡಳಿತದ ಜನಪ್ರಿಯತೆ. ಹೀಗಾಗಿ ಜನತಾದಳದ ಉಳಿವಿಗೆ ಇದ್ದದ್ದು ಎರಡೇ ದಾರಿ. ಮೊದಲನೆಯದು ಹೇಗಾದರೂ ಮಾಡಿ ಸರಕಾರದ ಭಾಗವಾಗುವುದು, ಎರಡನೆಯದು ಅದರ ಮೂಲಕ ಗರಿಷ್ಠ ಲಾಭ ಪಡೆಯುವುದು. ಮೊದಲನೆಯದ್ದು ಭಾಜಪದ ಜೊತೆಗಿದ್ದರು ಆಗುತ್ತಿತ್ತು ಆದರೆ ಲಾಭ ಮಾತ್ರ ಸ್ವಲ್ಪ ಕಮ್ಮಿಯಾಗುತ್ತಿತ್ತು. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ , ಕುಮಾರಸ್ವಾಮಿಯನ್ನು ಅನಿವಾರ್ಯವಾಗಿ ದೆಹಲಿಗೆ ಕಳಿಸಿಕೊಡುವ ರಿಸ್ಕು, ಅಕಸ್ಮಾತ್ ನಡುವೆ ಸರಕಾರ ಬೀಳಿಸಿದರೆ ಮುಂದಿನ 25 ವರ್ಷಗಳವರೆಗೆ ಲಿಂಗಾಯತರ ವೈರತ್ವ.
ಆದರೆ ಇಲ್ಲಿ ಕೆಲಸ ಮಾಡಿದ್ದು ಮಾತ್ರ ಮತ್ತದೇ ದೊಡ್ಡಗೌಡರ ರಾಜಕೀಯ ಅನುಭವ ಮತ್ತು ಜಾಣ್ಮೆ. ಕೇವಲ 16 ಸೀಟುಗಳನ್ನು ಇಟ್ಟುಕೊಂಡು ಪ್ರಧಾನಿಯಾದವರಿಗೆ ಇದೇನು ದೊಡ್ಡ ಕೆಲಸವಾಗಲಿಲ್ಲ ಬಿಡಿ. ಭಾಜಪ ಎಂಬ 'ಗುಮ್ಮ' ತೋರಿಸಿ ಕೇವಲ 35+ ಸೀಟುಗಳೊಂದಿಗೆ ಮುಖ್ಯಮಂತ್ರಿ ಕುರ್ಚಿ, ಪ್ರಮುಖ ಮಂತ್ರಿಗಿರಿಗಳು, ನಿಗಮ ಮಂಡಳಿಗಳು, ಬರಿದಾದ ಪಕ್ಷದ(ಕುಟುಂಬದ) ಖಜಾನೆ ತುಂಬಿಕೊಳ್ಳುವ ಅವಕಾಶ, ಸಿದ್ದರಾಮಯ್ಯ ಎಂಬ ರಾಜಕೀಯ ವೈರಿಯನ್ನು ಮಕಾಡೆ ಮಲಗಿಸಿದ್ದು, ಜೆಡಿಎಸ್ ಭದ್ರಕೋಟೆಯನ್ನು ಒಡೆಯಬಲ್ಲ ತಾಕತ್ತು ಮತ್ತು ರಾಜ್ಯದ ಎರಡನೆ ಪ್ರಬಲ ಒಕ್ಕಲಿಗ ನಾಯಕ ಡಿ. ಕೆ ಶಿವಕುಮಾರರನ್ನು ಕಟ್ಟಿಹಾಕಿದ್ದು, ತಮ್ಮ 3 ಜಿಲ್ಲೆಗಳಿಗೆ ಭರಪೂರ ಕೊಡುಗೆಗಳು, ಲೋಕಸಭೆ ಚುನಾವಣೆಯಲ್ಲಿ 2 ಸೀಟು ಗೆಲ್ಲಲು ಹೆಣಗಾಡುವವರು ತೀರಾ ಇತ್ತೀಚೆಗೆ 12 ಸೀಟುಗಳಿಗೆ ಬೇಡಿಕೆ ಇಟ್ಟಿದ್ದು, ಅದರ ಮೂಲಕ ಏಕೈಕ ಎದುರಾಳಿ (ಸದ್ಯದ ಮಿತ್ರ?) ಕಾಂಗ್ರೆಸ್ಸ್ ಅನ್ನು ಬುಡ ಸಮೇತ ನಿರ್ಣಾಮ.. ಪಟ್ಟಿ ಇನ್ನು ಬೆಳೆಯುತ್ತಲೇ ಹೋಗುತ್ತದೆ. ಅಕಸ್ಮಾತ್ ಭಾಜಪದ ಜೊತೆಗೇನಾದರೂ ಹೋಗಿದ್ದರೆ ಇದರಲ್ಲಿನ ಕಾಲು ಭಾಗದಷ್ಟು ಕಾರ್ಯಗಳು ಆಗುತ್ತಿರಲಿಲ್ಲ. ಹೇಳಿಕೇಳಿ ದೊಡ್ಡಗೌಡರದ್ದು ಪಕ್ಕಾ ಶಕುನಿಯ ದಾಳ. ಒಂದು ಕಲ್ಲಿನಿಂದ ನೂರು ಹಕ್ಕಿ ಹೊಡೆಯುವ ಲೆಕ್ಕಾಚಾರ . ಆದರೆ ಹೊಡೆಸಿಕೊಂಡ ಹಕ್ಕಿಗಳಲ್ಲಿ ಶೇಕಡ 80 ಕಾಂಗ್ರೆಸ್ನವು ಎಂಬುದು ಹಾಸ್ಯಾಸ್ಪದ!
ಇನ್ನು ಸರಕಾರದಿಂದ ಹೊರಹೋಗಲು ಜೆಡಿಎಸ್ ತೆಗೆದುಕೊಳ್ಳುವ ಸಮಯ 5 ವರ್ಷ(ಕಾಂಗ್ರೆಸ್ ಬಯಸಿದರೆ)! ಇಷ್ಟೆಲ್ಲ ಲಾಭಗಳನ್ನು ಹಾಗೆ ಉಳಿಸಿಕೊಂಡು, ಇನ್ನಷ್ಟು ಗಳಿಸಿಕೊಳ್ಳುವುದು ಜೆಡಿಎಸ್ ನ ಸ್ಪಷ್ಟ ಲೆಕ್ಕಾಚಾರ ಮತ್ತು ತಂತ್ರಗಾರಿಕೆ. ಜೆಡಿಎಸ್ ಹೀಗೆ ಭಾಜಪ ಎಂಬ ಗುಮ್ಮನನ್ನು ತೋರಿಸಿಕೊಂಡು ಸರಕಾರವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಳ್ಳುವದರಲ್ಲಿ ಅನುಮಾನವಿಲ್ಲ. ತನ್ನ ಉಳಿವಿಗೋಸ್ಕರ ಕಾಂಗ್ರೆಸ್ಸ್ ಅನ್ನು ಬಳಸಿಕೊಳ್ಳುತ್ತಿರುವುದು ಕಾಂಗ್ರೆಸ್ಗೆ ತಿಳಿಯದ್ದೇನಲ್ಲ ಆದರೆ ಏನು ಮಾಡುವುದು ಇದೆಲ್ಲ 'ಕಾಂಗ್ರೆಸ್ ನ ರಾಜಕೀಯ ಅನಿವಾರ್ಯತೆ'.
ಸಮಕಾಲೀನ ರಾಜಕೀಯ ಆಗುಹೋಗುಗಳ ಒಳನೋಟ ಮತ್ತು ರಾಜಕೀಯ ಊಹೆ ಮತ್ತು ವಿಶ್ಲೇಷಣೆ. ಎಲ್ಲ ಪಕ್ಷಗಳು ಮತ್ತು ರಾಜಕರಣಿಗಳಿಂದ ಸಮಾನ ಅಂತರ ಮತ್ತು ನೇರ ಬರಹಗಳು. ದಯವಿಟ್ಟು ಬೆಂಬಲಿಸಿ
Comments
Post a Comment